ಗುರುವಾರ, ನವೆಂಬರ್ 26, 2015


“ಆಳ್ವಾಸ್ ನುಡಿಸಿರಿ” - 2015

ಉದ್ಘಾಟನಾ ಭಾಷಣ


ಡಾ. ವೀಣಾ ಶಾಂತೇಶ್ವರ



ಎಲ್ಲರಿಗೂ ನಮಸ್ಕಾರ.
ಇಂದು ಸಂಜೆಯ ಈ ಶುಭಮುಹೂರ್ತದಲ್ಲಿ `ಆಳ್ವಾಸ್ ನುಡಿಸಿರಿ 2015'ರ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನದ ಕಾರ್ಯಕ್ರಮವನ್ನು ಉದ್ಘಾಟಿಸುವ ಅವಕಾಶ ನನಗೆ ದೊರೆತದ್ದು ಅನೇಕ ಕಾರಣಗಳಿಂದ ಅತ್ಯಂತ ವಿಶಿಷ್ಟ ಅನುಭವವಾಗಿ ಬಹುಕಾಲ ನನ್ನ ನೆನಪಿನಲ್ಲಿ ಉಳಿಯುವಂತಹದಾಗಿದೆ. ಯಾಕೆಂದರೆ, ಮೊದಲನೆಯದಾಗಿ, ಈ ಮೂಡುಬಿದರೆಯ ಸ್ಥಳ ಮಹಾತ್ಮೆಯೇ ವಿಶಿಷ್ಟವಾದದ್ದು, ಅನನ್ಯವಾದದ್ದು. ಇಲ್ಲಿ ಜೈನರ ಮಠಗಳು - ಬಸದಿಗಳು ಇವೆ. ಗೌರಿ - ಈಶ್ವರ -ವೆಂಕಟರಮಣ ಇತ್ಯಾದಿ ಹಿಂದೂ ದೇವತೆಗಳ ಮಂದಿರಗಳಿವೆ. ಅಲ್ಲದೆ ಮಸೀದಿಗಳೂ ಇವೆ, ಚರ್ಚ್‍ಗಳೂ ಇವೆ. ಸರ್ವಧರ್ಮ ಸಹಿಷ್ಣುತೆಗೆ- ಸೌಹಾರ್ದಕ್ಕೆ- ಸಹಬಾಳ್ವೆಗೆ ಇಡಿಯ ದೇಶಕ್ಕೇ, ಜಗತ್ತಿಗೇ, ಒಂದು ಸಾಂಕೇತಿಕ ಸಂದೇಶ ನೀಡುತ್ತಿರುವಂತಿದೆ ಈ ಊರು. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಈ ಸಮನ್ವಯ ಸಂದೇಶದ ಅರ್ಥವನ್ನು ತಿಳಿದುಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ. ಎರಡನೆಯದಾಗಿ, ಹನ್ನೆರಡು ವರ್ಷಗಳಷ್ಟು ಹಿಂದೆ ನಿರ್ದಿಷ್ಟ
ವಾದ ಸದುದ್ದೇಶಗಳೊಂದಿಗೆ ಪ್ರಾರಂಭವಾಗಿ, ವರ್ಷದಿಂದ ವರ್ಷಕ್ಕೆ ಹೆಚ್ಚಿನ ಅರ್ಥಪೂರ್ಣತೆಯನ್ನು, ವಿಷಯವೈವಿಧ್ಯತೆಯನ್ನು, ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುತ್ತ, ಮೈಗೂಡಿಸಿಕೊಳ್ಳುತ್ತ ಸಾಗಿ ಬಂದಿರುವ ಆಳ್ವಾಸ್ ನುಡಿಸಿರಿಯ ಸಾಧನೆ ಬೆರಗುಗೊಳಿಸುವಂಥದ್ದು. ಕೇವಲ ವಿದ್ವಾಂಸರಿಗೆ ವೇದಿಕೆಯಾಗದೆ, ನಾಡಿನಾದ್ಯಂತದ ಸಹೃದಯೀ ಸಾಮಾನ್ಯ ಜನರನ್ನು, ವಿಶೇಷವಾಗಿ ಯುವಜನಾಂಗವನ್ನು, ಸೆಳೆಯುತ್ತಿರುವ ಈ ಕಾರ್ಯಕ್ರಮ ದೇಶಕ್ಕೇ ಮಾದರಿಯಾದದ್ದು. ಮೂರನೆಯದಾಗಿ, ಒಬ್ಬ ವ್ಯಕ್ತಿಗೆ ಗಿisioಟಿ ಅನ್ನುವುದು ಇದ್ದರೆ, ಜೊತೆಗೆ ಕರ್ತೃತ್ವಶಕ್ತಿ-ಛಲ-ನೈತಿಕ ಧೈರ್ಯವೂ ಇದ್ದರೆ, ಆ ವ್ಯಕ್ತಿಯೊಂದಿಗೆ ಹಲವಾರು ಸಮಾನಮನಸ್ಕರು ಕೈಜೋಡಿಸಿ ಹೆಗಲುಕೊಟ್ಟು ನಿಂತರೆ, ಇವರೆಲ್ಲರ ಒಟ್ಟು ದೃಷ್ಟಿಕೋನ ಇತ್ಯಾತ್ಮಕವಾಗಿದ್ದರೆ, ಪವಾಡಗಳನ್ನೇ ಸಾಧಿಸಬಹುದು- ಅನ್ನುವುದನ್ನು ಇಲ್ಲಿ ಡಾ. ಮೋಹನ ಆಳ್ವ ಹಾಗೂ ಸಂಗಡಿಗರು ಸಿದ್ಧಮಾಡಿ ತೋರಿಸಿದ್ದಾರೆ. ನಾಲ್ಕನೆಯದಾಗಿ ಇಲ್ಲಿ ಪ್ರತಿವರ್ಷ ನಡೆಯುವ ನುಡಿಸಿರಿ ಹಾಗೂ ವಿರಾಸತ್ ಎಂಬ ಎರಡು ಬೃಹತ್ ಕಾರ್ಯಕ್ರಮಗಳು ಸಾಹಿತ್ಯ ಹಾಗೂ ಸಂಸ್ಕøತಿಗೆ ಸಂಬಂಧಪಟ್ಟಂತಹವು. ಸಾಹಿತ್ಯ-ಸಂಗೀತ-ಹಾಗೂ ಇತರ ಲಲಿತ ಕಲೆಗಳು ಮನುಷ್ಯನ ವ್ಯಕ್ತಿತ್ವವನ್ನು ಪರಿಷ್ಕರಿಸುವ, ಅವನಲ್ಲಿಯ ದುಷ್ಟಶಕ್ತಿಗಳನ್ನು ನಾಶಗೊಳಿಸಿ ಮನಸ್ಸನ್ನು ಪರಿಶುದ್ಧಗೊಳಿಸುವ, ಮತ್ತು ಅವನನ್ನು ದೈವತ್ವದೆಡೆಗೆ ಕರೆದೊಯ್ಯುವ ಸಾಧನಗಳಾಗಿವೆ. ಇವತ್ತು ಎಲ್ಲಾ ಕಡೆ ತಾಂಡವವಾಡುತ್ತಿರುವ ಅಶಾಂತಿ, ಅಸಹನೆ, ಅಸಹಿಷ್ಣುತೆ ಇತ್ಯಾದಿ ಅನಿಷ್ಟಗಳನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಲು ಅವಶ್ಯವಿರುವ ಮಾನಸಿಕ ಸ್ಥೈರ್ಯ ನಮಗೆ ಸಾಹಿತ್ಯ-ಸಂಗೀತ-ಕಲೆ ಇವುಗಳಿಂದಲೇ ಸಿಗಬೇಕು. ಈ ನಿಟ್ಟಿನಲ್ಲಿಯೂ ಈ ಕಾರ್ಯಕ್ರಮಗಳು ಮುಖ್ಯವೆನಿಸುತ್ತವೆ. ಈ ಎಲ್ಲ ಕಾರಣಗಳಿಗಾಗಿ ಇವತ್ತು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದು ನನಗೊಂದು ಅಪರೂಪದ ಅನುಭವ. ಮತ್ತು ಇವೇ ಕಾರಣಗಳಿಗಾಗಿ, ಈ ನುಡಿಸಿರಿ ಕಾರ್ಯಕ್ರಮವೇ ನಮ್ಮ ನಾಡಿನಲ್ಲಿ ಹೊಸತನದ ಹುಡುಕಾಟದ (ಕರ್ನಾಟಕ-ಹೊಸತನದ ಹುಡುಕಾಟ ಎಂಬುದು ಈ ಸಲದ ಪ್ರಧಾನ ಪರಿಕಲ್ಪನೆಯಾಗಿದೆ) ಜೀವಂತ ಸಂಕೇತವಾಗಿದೆ ಎಂದು ಹೇಳಬಹುದು.
ಇಂದಿನಿಂದ ನಾಲ್ಕುದಿನ ನಡೆಯಲಿರುವ ಗೋಷ್ಠಿಗಳಲ್ಲಿ ಸಾಹಿತ್ಯ, ಶಿಕ್ಷಣ, ಮಾಧ್ಯಮ ಕ್ಷೇತ್ರಗಳಲ್ಲಿ ಹೊಸತನದ ಹುಡುಕಾಟದ ಬಗ್ಗೆ ಚಿಂತನೆ ನಡೆಯಲಿದೆ.
ನಾಡಿನ ಹಿರಿಯ ವಿದ್ವಾಂಸರು, ವಿಚಾರವಾದಿಗಳು, ನಮ್ಮೆಲ್ಲರಿಗೆ ಮಾರ್ಗದರ್ಶಕರು ಆದಂತಹ ಶ್ರೀ ವೆಂಕಟಾಚಲ ಶಾಸ್ತ್ರಿಗಳು ಈ ಸಲದ ‘ನುಡಿಸಿರಿ’ಯ ಅಧ್ಯಕ್ಷರಾದದ್ದು ಬಹಳ ಖುಶಿಯ ವಿಷಯ. ಅವರ ನೇತೃತ್ವದಲ್ಲಿ ಈ ನಾಲ್ಕು ದಿನಗಳ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಈ ಎಲ್ಲ ಸಂಭ್ರಮದ ಪ್ರೇರಕಶಕ್ತಿಯಾಗಿರುವ ಡಾ. ಮೋಹನ ಆಳ್ವ ಅವರಿಗೂ ಅವರೊಂದಿಗೆ ಕೈಜೋಡಿಸಿರುವ ಎಲ್ಲ ನಿಷ್ಠಾವಂತ ಸಹಕಾರಿಗಳಿಗೂ ನನ್ನ ಗೌರವಪೂರ್ವಕ ಅಭಿನಂದನೆಗಳು. ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ವಂದನೆಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ